ಕಣ್ವ : ಸಪ್ತರ್ಷಿಗಳಲ್ಲಿ ಒಬ್ಬ. ಋಗ್ವೇದದಲ್ಲಿ ಈತನನ್ನು ಕುರಿತ ಅನೇಕ ಸೂಕ್ತಿಗಳಿವೆ. ಸಮುದ್ರಮಥನ ನಡೆದಾಗ ಸೂರ್ಯನ ಹುಬ್ಬಿನಿಂದ ತೊಟ್ಟಿಕ್ಕಿದ ಬೆವರಿನ ಒಂದು ಹನಿಯಿಂದ (ಕಣ) ಈತ ಉದ್ಭವಿಸಿದನೆಂದು ಕಥೆ. ಈತ ಬಹಳ ಶಾಂತಸ್ವಭಾವದವನೂ ಕರುಣಿಯೂ ಆಗಿದ್ದ. ಈತನ ವಂಶಜರಿಗೆ ಕಾಣ್ವರು ಎಂದು ಹೆಸರು. ಇವರ ಪೈಕಿ ನಾರದ ಮಹರ್ಷಿ ಬಹಳ ಪ್ರಖ್ಯಾತನಾದವ.

ಶಕುಂತಲೆಯನ್ನು ಸಾಕಿದ ಕಣ್ವಋಷಿಯೂ ಇದೇ ವಂಶದವ. ಮಾಲಿನೀ ನದೀತೀರದಲ್ಲಿ ಇವನ ಆಶ್ರಮವಿತ್ತು. ಈತ ಮಹಾತಪಸ್ವಿ. ತನ್ನ ಆಶ್ರಮದಲ್ಲಿ ಹತ್ತುಸಾವಿರಕ್ಕೂ ಮೇಲ್ಪಟ್ಟು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡುತ್ತ ಕುಲಪತಿಯೆಂಬ ಖ್ಯಾತಿಗೆ ಒಳಗಾದವನೆಂದು ಕಾಳಿದಾಸನ ಅಭಿಜ್ಞಾನ ಶಾಕುಂತಲದಿಂದ ತಿಳಿದುಬರುತ್ತದೆ. ಮಹಾಭಾರತದ ದುಷ್ಯಂತೋಪಾಖ್ಯಾನದಲ್ಲೂ ಇವನ ಬಗ್ಗೆ ಉಲ್ಲೇಖವಿದೆ. 	(ಎನ್.ಎನ್.ಆರ್.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ